ಕಾಷ್‍ನಿಟೇ, ಮೇರಿ ಲೂಯಿಸೆ

 1901-. ಜರ್ಮನಿಯ ಕವಯತ್ರಿ, ಕಾದಂಬರಿ ಹಾಗೂ ಕಥೆಗಾರ್ತಿ. ನಾಜಿûಗಳು ಜರ್ಮನಿಯಲ್ಲಿ ಪ್ರಬಲರಾಗಿ ಬೌದ್ಧಿಕ ಸ್ವಾತಂತ್ರ್ಯವನ್ನು ನಾಶಗೊಳಿಸಲು ಪ್ರಾರಂಭಿಸಿದಾಗ ಹಲವು ಸಾಹಿತಿಗಳು ದೇಶವನ್ನು ಬಿಟ್ಟುಹೋದರು. ಅವರು ಜರ್ಮನಿಯಾಚೆ ನಿಂತು ತಮ್ಮ ಸಾಹಿತ್ಯ ಸೃಷ್ಟಿಯನ್ನು ಮುಂದುವರಿಸಿದರು. ಕೆಲವರು ದೇಶದೊಳಗೇ ಉಳಿದು ಸಾಹಿತ್ಯ ಸೃಷ್ಟಿಗೆ ತೊಡಗಿದರು. ಈಕೆ ಈ ಗುಂಪಿಗೆ ಸೇರಿದವಳು.

 ಈಕೆ 1927 ರಿಂದ ಕವನಗಳನ್ನು ಬರೆಯುತ್ತಿದ್ದರೂ ಮೊದಲನೆಯ ಕವನ ಸಂಗ್ರಹ ಪ್ರಕಟವಾದುದು 1947ರಲ್ಲಿ. ಇವಳು ಎರಡು ಮಹಾಯುದ್ಧಗಳ ಅನುಭವಗಳನ್ನು ಉಂಡವಳು. ಹಿಟ್ಲರನ ಪ್ರಭುತ್ವದ ದಬ್ಬಾಳಿಕೆಯನ್ನು ಕಂಡವಳು. ಎರಡು ಬಾರಿ ಸೋತ ತನ್ನ ದೇಶದ ಸಂಕಟವನ್ನು ಅನುಭವಿಸಿದವಳು. ಇದರಿಂದ ಇವಳ ಕವನಗಳ ಸ್ಥಾಯೀ ಭಾವ ವಿಷಾದ, ವಸ್ತು ಯುದ್ಧಕಾಲದ ಅನುಭವಗಳು. ಅನುಭವದ ತೀಕ್ಷ್ಣತೆ ಮತ್ತು ಪ್ರಾಮಾಣಿಕತೆ, ಛಂದಸ್ಸಿನ ವೈವಿಧ್ಯ, ಅದರ ಮೇಲೆ ಇವಳ ಅಸಾಧಾರಣ ಪ್ರಭುತ್ವ-ಇವು ಈಕೆಯನ್ನು ಶ್ರೇಷ್ಠ ಕವಯಿತ್ರಿಯನ್ನಾಗಿ ಮಾಡಿದುವು.

 ಲೀಬಿ ಬಿಗಿಂಟ್ (ಪ್ರೇಮದ ಉದಯ-1933) ಇವಳ ಮೊದಲ ಗಣನೀಯ ಕಾದಂಬರಿ. ಇದು ಬಹುಮಟ್ಟಿಗೆ ಆತ್ಮವೃತ್ತ. ಈಕೆಯ ಪ್ರಸಿದ್ಧ ಕಾದಂಬರಿ ಗಸ್ಟೇವ್ ರೂರ್‍ಬೆಟ್ (1950). ರಾಜಕೀಯ ಕ್ರಾಂತಿಯಲ್ಲಿ ಭಾಗವಹಿಸಿದ ಫ್ರೆಂಚ್ ಚಿತ್ರಕಾರ ಈ ಕೃತಿಯ ನಾಯಕ.

 ತನ್ನ ಸಣ್ಣಕಥೆಗಳಲ್ಲಿ ಈಕೆ ಸಾಮಾನ್ಯ ಅನುಭವಗಳಾಚೆಯ ಒಂದು ಕಾಲ್ಪನಿಕ ಜಗತ್ತಿನಲ್ಲಿ ಕಾಲಿಡಲು ಯತ್ನಿಸಿದ್ದಾಳೆ. ಕಥೆಯ ವೃತ್ತಾಂತ ರೀತಿಯಲ್ಲಿ ಪ್ರಾಚೀನ ಸಾಹಿತ್ಯ ಮನೋಧರ್ಮವಿದ್ದರೂ ನಿರೂಪಣೆಯಲ್ಲಿ ಸಂಯಮ, ಸಾಮಗ್ರಿಯ ಜಾಗೃತ ವಿನ್ಯಾಸ ಕಾಣುತ್ತವೆ.          

    (ಎಲ್.ಎಸ್.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ